Sunday, 2 October 2016

ಭರವಸೆಯೇ ಬೆಳಕು..


ಬದುಕಿನ ರಂಗಭೂಮಿಯಲಿ
ಮುಖವಾಡ ಅನಿವಾರ‍್ಯ...
ನಿನ್ನ ಪಾತ್ರ ಮುಗಿಯುವರೆಗೆ ಮಾತ್ರ...
ಮುಖವಾಡವೇ ಮುಖವಾದರೆ 
ನಿಜ ಪಾತ್ರದಾರಿ ಮರೆಯಾಗುವನು..
ಸೂತ್ರದಾರಿಯೇ ಗುರುವಾಗುವನು..

ಕರಗುವ ಚಂದಿರ ಪೂರ್ಣನಾಗುವನು
ಅಮವಾಸ್ಯೆ ಕಳೆದು ಹುಣ್ಣಿಮೆಯಲಿ...
ಆದರೆ ಕರಗಿದ ಮನಸ್ಸು ದೃಢವಾಗುವುದೇ
ಬೆರಳೆಣಿಕೆಯ ದಿನಗಳಲಿ..
ಅಂದದ ಮನಸ್ಸಿಗಿಂತ ಆಭರಣವಿಲ್ಲ...
ಆದರೆ ನೀ ಆಭರಣದಂಗಡಿಯ ಮಾಲಿಕನಲ್ಲ
ಪ್ರತಿ ಬಾರಿ ಹೊಸದು ಕೊಳ್ಳಲಿಕ್ಕೆ....
ಆಭರಣವ ಜೋಪಾನವಿರಿಸು..
ಪ್ರೀತಿಯಿಂದ ಕೊಳ್ಳುವವರು ಸಿಕ್ಕಾರು...

ಸ್ನೇಹಿತರು,ಕುಲದವರು,ನಿನ್ನೂರಿನ ಕಡೆಯವರು
ಎಲ್ಲರೂ ಜೊತೆಗಿರುವರು ಬೆಳದಿಂಗಳೂಟಕೆ..
ನಿನ್ನಿಂದಾಗುವ ಕೆಲಸಕೆ...
ಬಾರದೆ ಇರಲು ಕಾರಣ ಕೊಡುವರು
ನಿನ್ನ ಕತ್ತಲ ಕೂಟಕೆ,
ನಿನ್ನ ನೋವಿನ ಮಂಟಪಕೆ ...
ನಿನಗೆ ತಿಳಿದಿರಲಿ ನೀ ಯಾರಿಗೂ ಕಡಿಮೆ ಏನಿಲ್ಲ
ಪ್ರತೀ ಬಾರಿ ಸೋತಾಗಲೂ ಎದ್ದು ನಿಲ್ಲಲ್ಲಿಕ್ಕೆ...
ಬದುಕ ವ್ಯಯಿಸಬೇಡ ಈ ಕ್ಷಣದ ಸುಖಕಾಗಿ
ಬದುಕು ನೀ ನಿನ್ನ ಬದುಕಿಸಿದ ತಾಯಿಗಾಗಿ..
ಬದುಕು ನೀ ನಿನ್ನ ಬೆಳೆಸಿದ ತಂದೆಗಾಗಿ..
ಬದುಕು ನೀ ನಿನ್ನ ರೂಪಿಸಿದ ಗುರುವಿಗಾಗಿ..


ಸತ್ಯಕ್ಕೆ ಸೋಲಿಲ್ಲ
ಸುಳ್ಳಿಗೆ ಜಯವಿಲ್ಲ
ಅವಕಾಶಕೆ ಕೊನೆಯಿಲ್ಲ
ಅಪವಾದವೇ ಕೊನೆಯಲ್ಲ
ಗೆಲುವೇ ಶಾಶ್ವತವಲ್ಲ
ಸೋಲೇ ಸಮಾಧಿಯಲ್ಲ
ಇದನ್ನರಿತರೆ ನೀ ಜಗತ್ತಿನಲ್ಲಿ
ಇಲ್ಲದಿದ್ದರೆ ಜಗತ್ತು ಇನ್ನೆಲ್ಲಿ..?

Thursday, 11 August 2016

ಬಾನಂಗೋಚಿ..


ಬಾನಿಗೊಮ್ಮೆ ಹಾರುವಾಸೆ 
ಬಾನಂಗೋಚಿಯಾಗುವಾಸೆ
ಮೋಡದೊಡನೆ ತೇಲಿ ತೇಲಿ
ಮನದ ನೋವ ಮರೆಯುವಾಸೆ..

ಮೇಲೆ ಹೋಗಿ ಹಗುರವಾಗಿ
ತನ್ನ ತನವ ಕಾಣುವಾಸೆ
ಸೂರ್ಯ ಚಂದ್ರ ತಾರೆಯೊಡನೆ
ಸ್ನೇಹಸೌಧ ಕಟ್ಟುವಾಸೆ..

ಮೇಲೆ ಹೋಗಿ ಇಣುಕಿ ನೋಡಿ
ಕಣ್ಣಾಮುಚ್ಚೆಯಾಡುವಾಸೆ..
ಮಗುವಿನಂತೆ ಮುಗ್ಧವಾಗಿ
ಬಾನ ತೊಟ್ಟಿಲಲಿ ಮಲಗುವಾಸೆ..

ಕೊನೆಯೇ ಇರದ ಬಾನಿನಲ್ಲಿ
ಗೆಜ್ಜೆ ಕಟ್ಟಿ ಕುಣಿಯುವಾಸೆ
ಯಾರೂ ಇರದ ಊರಿನಲ್ಲಿ
ನಾನೇ ನನ್ನ ಹುಡುಕುವಾಸೆ..

ಬಾನಾಡಿ ಜೊತೆ ಸೇರಿ
ಸ್ವತಂತ್ರವಾಗಿ ಹಾರುವಾಸೆ
ಬಾನಲಿರುವ ಸ್ವಚ್ಚಂದ ಪ್ರೀತಿಯಾ
ಭೂಮಿಗೂ ತರುವ ಆಸೆ...






Saturday, 6 August 2016

ವಿರಹಿ...!



ಕಾಡುವ ಪದಗಳ ಲೋಕಕೆ
ನೀನೇ ಮಾಲಿಕನು..
ತೇಲುವ ತೆರೆಗಳ ಕಡಲಿಗೆ
ನೀನೇ ಯಾತ್ರಿಕನು..
ಏನೇ ಹಾಡಿದರೂ ನಾನೇನೇ ಗೀಚಿದರೂ
ನಿನ್ನ ನೆನಪೇ ನನ್ನನ್ನು ಸಂಮೋಹಿಸುತಿದೆ



ಸಾಕಾಯ್ತು ನಂಗಂತೂ ಮಾತುಕತೆ
ಆಲಿಸುವೆ ನಿನ್ನ ಕವಿತೆ..
ಜೋರಾಯ್ತು ನನ್ನಲ್ಲಿ ಮೂಕವ್ಯಥೆ
ಊಹಿಸಲು ನಿನ್ನ ಕುರಿತೇ..
ಮುಗಿಯದ ಭಾವದ ಬಳುವಳಿಗೆ
ಮರುಗಿದೆ ನನ್ನ ಮನ



ನೀ ಆಡಿದ ಎಲ್ಲಾ ಮಾತಿಗೂ ಕೂಡ
ನನ್ನ ಭಾವವೂ ನಿಗೂಢ..
ನೀ ಕಾಡಿದ ಎಲ್ಲಾ ಕನಸಲೂ ಕೂಡ
ನನ್ನ ಕಲ್ಪನೆ ಅಗಾಧ..
ಚುರುಕಿನ ಪ್ರೀತಿಯ ಚಳುವಳಿಗೆ
ಕರಗಿದೆ ನನ್ನ ಮನ

Saturday, 12 March 2016

ಹಾಗೆ ಸುಮ್ಮನೆ..!!

ಈ ಕಾಲವೇ ಹೀಗೆ..ಅದು ಬದಲಾದಂತೆ ನಮನ್ನು ಬದಲಿಸುತ್ತದೆ.ಅದರ ಓಟಕ್ಕೆ ತಕ್ಕಂತೆ ನಮ್ಮನ್ನೂಓಡಿಸುತ್ತದೆ.ಎಂದೋ ಮಾಡಿದ ಜಗಳ ಇಂದು ಕ್ಷುಲ್ಲಕವೆನಿಸುತ್ತದೆ.ಎಂದೋ ಹಾಡಿದ ಹಾಡು ಇಂದು ಅರ್ಥಪೂರ್ಣ ಎನಿಸುತ್ತದೆ.ಎಂದೋ ಮಾಡಿದ ಕೆಲಸ ಇಂದು ಫಲ ಕೊಡುತ್ತಿದೆ ಎನಿಸುತ್ತದೆ.ಯಾರೋ ಮಾಡಿದ ನೋವು ಮತ್ತೆ ಮತ್ತೆ ಕಾಡುತ್ತದೆ.ಇನ್ಯಾರನ್ನೋ ಜೀವ ಹೆಚ್ಚು ಹೆಚ್ಚು ನೆನಪಿಸಿಕೊಳ್ಳುತ್ತದೆ.

ಜೀವಕ್ಕೆ ಜೀವವಾಗಿದ್ದ ಗೆಳತಿ,ಗೆಳೆಯರು ಯಾವುದೋ ನೆಪವೊಡ್ಡಿ ದೂರಾಗುತ್ತಾರೆ.ನಿನ್ನೆಯ ವರೆಗಿನ ಸತ್ಯ  ಇಂದು ಸುಳ್ಳೆಂದು ಗೊತ್ತಾದ ಬಳಿಕ ಸತ್ಯ-ಸುಳ್ಳುಗಳ ನಡುವಿನ ಅಂತರದ ಹುಡುಕಾಟ ಶುರುವಾಗುತ್ತದೆ.ಇಂದಿನ ಖುಷಿಯನ್ನು ನಾಳೆಯ ಭಯ ಮುಚ್ಚಿ ಹಾಕುತ್ತದೆ.


ಪ್ರತಿ ಕ್ಷಣ ಬದುಕಿನ ದಾರಿಯ ಬದಲಿಸುವ ಹಂಬಲದಲ್ಲಿರುತ್ತೇವೆ.ಇನ್ನೊಬ್ಬರ ಬದುಕಲ್ಲಿ ನಾವು ಕಾಣದ  ಏನೋ ಸಂತೋಷವಿದೆ ಎಂದು ನಂಬುತ್ತೇವೆ.ಅವರ ಬದುಕಲ್ಲಿ ನಾವು ಕಾಣದ ನೋವು ಕೂಡ ಇದೆ ಎಂಬುದು ಮರೆಯುತ್ತೇವೆ.ಇನ್ನೊಬ್ಬರ ಮೆಚ್ಚಿಸುವ ತವಕದಲ್ಲಿ ನಮ್ಮ ಮೆಚ್ಚುಗೆ ಯಾವುದಾಗಿತ್ತೆಂಬುದೇ ಮರೆಯುತ್ತೇವೆ

ಕಣ್ಣಿನ ನೋಟ,ಕಿವಿಗಳ  ಆಲಿಸುವಿಕೆ ಎಲ್ಲವೂ ಭಾಲಿಶವಾಗ ತೊಡಗಿವೆ.ಒಳಾರ್ಥಗಳ ಅರಿಯುವ ಸಹನೆ ಇಲ್ಲವಾಗಿದೆ.ಭಾವನೆಯ ಬೆಲೆಯನ್ನು ಹಣದ ಬೆಲೆಯಿಂದ ಕೊಳ್ಳುತ್ತೇವೆ.ದೊಡ್ಡ ಸಂತೋಷಗಳ ನಡುವೆ ಚಿಕ್ಕ ಖುಷಿಗಳು ಕಾಣದಾಗಿವೆ.ಪಬ್ಬು-ಪಾರ್ಟಿಗಳ ನಡುವೆ ಹಬ್ಬ-ಹರಿದಿನಗಳ ಸಡಗರ ಮರೆಯಾಗಿದೆ

ಕಾಂಕ್ರೀಟು ಗೋರಿಗಳ ನಡುವೆ ನಿಸರ್ಗದ ನಿರುಮ್ಮಳ ನಗೆ ಅಡಗಿ ಹೋಗಿದೆ.ರೆಡಿಮೇಡು ಖಾದ್ಯಗಳ ವಾಸನೆಯ ನಡುವೆ ದೇವರಿಗಿಟ್ಟ ಮಲ್ಲಿಗೆಯ ಘಮ ಮಾಯವಾಗಿದೆ.ಜೀನ್ಸು-ಟಾಪುಗಳ ಹಾವಳಿಗೆ ದಾವಣಿ-ಸೆರಗುಗಳು ಬದಿಗೋಗಿವೆ.ಟೀವಿ-ಸೀರೇಲುಗಳ ಪ್ರಭಾವಕ್ಕೆ ಆಡುವ ಮಾತಿನ ತೂಕ ಕಡಿಮೆಯಾಗಿದೆ.

ಆಡುವ ಕೈಲಿ ಬೇಡದ ಮೊಬೈಲು ಬಂದಿದೆ.ಪುಸ್ತಕದ ಬದಲು ಇಂಟರ್ನೆಟ್ ಬಂದಿದೆ.ಮಾನವ ಯುಗದಿಂದ  ಯಾಂತ್ರಿಕ ಯುಗಕ್ಕೆ ಬದಲಾಗುತ್ತಿದೆ.ಚಂದಿರ ತುತ್ತು ತಿನಿಸಲು ಮಾತ್ರ ಅಲ್ಲ ಚಂದಿರನಲ್ಲಿಗೆ ಹೋಗಿ ಬರಲು ಸಾಧ್ಯ ಎಂದು ತಿಳಿದಿದ್ದೇವೆ.ಕ್ಷಣಾರ್ದದಲ್ಲಿ ಜಗತ್ತನ್ನೇ ಕೊಳ್ಳುವ ದುಸ್ಸಾಹಸದಲ್ಲಿದ್ದೇವೆ.ಯೋಚನಾ ಲಹರಿಗಳ ಬದಿಗೊತ್ತಿ ಅವಸರದ ಬದುಕು ಕಟ್ಟಿಕೊಂಡಿದ್ದೇವೆ.


ಕಾಲದ ಜೊತೆ ಸೆಣಸಾಡಿ ಏನನ್ನೋ ಗೆಲ್ಲುವ ತವಕದಲ್ಲಿ ಎಲ್ಲವನ್ನು ಮರೆತಿದ್ದೇವೆ..ಹೆತ್ತ ತಾಯಿಯನನ್ನೂ ಕೂಡ...!!!ಇಂತಹ ಅರ್ಥಹೀನ ಬದುಕನ್ನು ಸಾವಿರ ವರ್ಷ ಬದುಕುವುದಕ್ಕಿಂತ
ಭಾವಪೂರ್ಣವಾಗಿ ಒಂದು ದಿನ ಬದುಕಿದರೂ ಸಾಕಲ್ಲವೇ..?







Thursday, 26 November 2015

ಹೃದಯದ ಮಾತು....!!

(ಮಾತಿನಲ್ಲಿ ಹೇಳಲಾರೆನು.. ಗೀತೆಯ ರಾಗಕ್ಕೆ ಅನುಗುಣವಾಗುವಂತೆ)



















ಕನಸಲೊಂದು ಕನಸು ಮೂಡಿದೆ
ಮನಸು ಒಂದು ಸುಳ್ಳು ಹೇಳಿದೆ
ಆದರೂನು ನಂಬಿ ನಕ್ಕ ಹುಚ್ಚು ಮೂರ್ಖ ನಾ
ಅಂತ ಸಂಗತಿ... ನಿನ್ನ ಅನುಮತಿ
ಮುಗಿದು ಹೋಯಿತೇ ನನ್ನ ಗ್ರಹಗತಿ..
ನಾನು ಹಾರಿ ಹೋದೆ ನನ್ನ ಬಿಟ್ಟು ದೂರ ದೂರಕಿಂದು
ಅಂತ ಸಾಹಸ.. ಹುಚ್ಚು ಸಂತಸ
ಕೊನೆಯೇ ಕಾಣದ ಸ್ವಪ್ನ ಸಾಗರ


ಒಲವಲ್ಲಿದೆ ಈ ಒಲವಲ್ಲಿದೆ, ಮರೆಯಾಗದ ಹೊಸ ಆಕರ್ಷಣೆ
ನಿನ್ನಲ್ಲಿದೆ ಆಹಾ ನಿನ್ನಲ್ಲಿದೆ, ಮನ ಕದಿಯುವ ತುಂಟ ಸಂಭಾಷಣೆ
ಬಲೆಯಲಿರುವ ಮೀನು ನಾನು, ನನ್ನ ಜೀವಧಾರೆ ನೀನು
ನಿನ್ನ ಬಿಟ್ಟು ನಾನು ಇನ್ನು ಬಾಳಲಾರೆನು
ಮನದ ಮಳಿಗೆಯಲ್ಲಿ ಬಂದು ಹೋದಂತ ಚೋರಿ ನೀನು
ನನ್ನ ಉಸಿರಲಿ...ನಿನ್ನ ಹೆಸರಿದೆ
ಏಕೆ ಉಳಿಸಿದೆ ನೀ ನನ್ನ ಕೊಲ್ಲದೆ


ಕಣ್ಣಲ್ಲಿದೆ ಆ ಕಣ್ಣಲ್ಲಿದೆ, ಕೊನೆ ಕಾಣದ ಆ ಸಿಹಿಸ್ವಾಗತ
ಅರಿವಿಲ್ಲದೆ ಮನ ಅನುಭವಿಸಿದೆ ,ನೀನಿಲ್ಲದ ಸಿಹಿ ಸಂಕಟ
ಮನದ ಮಾತು ಕೇಳದೇನೆ, ಸರಿಯೋ ತಪ್ಪೋ ತಿಳಿಯದೇನೇ
ಹೃದಯವನ್ನು ಕೈಲಿ ಹಿಡಿದು ಬಳಿಗೆ ಬಂದೆನು
ನೀನೇ ಇಲ್ಲದೇನೆ ಈ ಜೀವ ನನ್ನ ಬಿಟ್ಟು ಹೋಗಿ
ಇಲ್ಲವಾದೆ ನಾ..ಇನ್ನು ಬಾರೆಯಾ..
ನನ್ನ ಜೀವಕೆ ಉಸಿರು ನೀಡೆಯಾ..

ಬಾಲ್ಯದಲ್ಲೇ ಕನ್ನಡ-ನುಡಿ ನಮನ



ಪ್ರಾಚೀನ  ಭಾಷೆಗಳಲ್ಲಿ ಒಂದಾದ ಕನ್ನಡ ಇಂದು ಕರ್ನಾಟಕಕ್ಕೆ ಮಾತ್ರ ಅದರಲ್ಲೂ ಹಳ್ಳಿ ಪ್ರದೇಶಗಳಿಗೆ ಮಾತ್ರ ಸೀಮಿತವಾಗಿರುವ ಪರಿಸ್ಥಿತಿ ಎದುರಾಗಿದೆ. ಇದಕ್ಕೆ ಕನ್ನಡಿಗರಲ್ಲದೇ ಇನ್ನಾರು ಕಾರಣ..."ಕನ್ನಡ ಎಂದರೆ ಕಿವಿ ನಿಮಿರುವುದು" ಎಂಬ ಕುವೆಂಪು ರವರ ಸಾಲು ಇಂದು ಬೇರೆಯದೇ ರೀತಿಯಲ್ಲಿ ಸತ್ಯವೆನಿಸಿದೆ.ಸುತ್ತಲೂ ಕಿವಿಗೆ ಬೀಳುವ ಹತ್ತಾರು ಭಾಷೆಗಳ ಮಧ್ಯದಲ್ಲಿ ಒಂದು ಕನ್ನಡ ಪದ ಕಿವಿಗೆ ಬಿದ್ದರೆ ಕಿವಿ ನಿಮಿರುವುದರಲ್ಲಿ ಸಂದೇಹವಿಲ್ಲ.

ಬಾಲ್ಯದಲ್ಲಿಯೇ ,,, ತಿದ್ದಿಸಿ,"ಒಂದು ಎರಡು ಬಾಳಲೆ ಹರಡು" ಪದ್ಯಗಳನ್ನು ಕಲಿಸುತ್ತಾ ಮಕ್ಕಳನ್ನು ಬೆಳೆಸಬೇಕಿದ್ದ ಪಾಲಕರು,ಇಂದು ತಾವು ದುಡಿದ ಹಣವನ್ನೆಲ್ಲಾ ಕಟ್ಟಿ ಮಕ್ಕಳನ್ನು ಆಂಗ್ಲ ಶಾಲೆಗಳಿಗೆ ಸೇರಿಸುತ್ತಿರುವುದು ಸರ್ವೇ ಸಾಮಾನ್ಯವಾಗಿದೆಆಂಗ್ಲ ಶಾಲೆಗಳು ಇರುವುದು ಕರ್ನಾಟಕದಲ್ಲಾದರೂ ಅಲ್ಲಿ ಮೊಟ್ಟಮೊದಲು ಕಲಿಸುವುದು ಆಂಗ್ಲ ಭಾಷೆಯನ್ನು.ಒಂದನೇ ತರಗತಿಗೆ ಕಾಲಿಟ್ಟ ಮಗು ಆಂಗ್ಲ ಭಾಷೆಯಲ್ಲಿ ವಾಕ್ಯ ಮಾಡಿ ಬಳಸುವುದನ್ನೇ ಕಲಿತಿರುತ್ತದೆ ಆದರೆ ಕನ್ನಡ ವರ್ಣಮಾಲೆಯ ಅಕ್ಷರಗಳನ್ನು ಗುರುತಿಸಲೂ ಕಷ್ಟ ಪಡುತ್ತದೆ. ಸರಾಗವಾಗಿ ಆಂಗ್ಲ ಭಾಷೆ ಕಲಿತಿರುವ ಮಗು ಕ್ಲಿಷ್ಟವಾದ ರಚನೆ ಒಳಗೊಂಡ ವರ್ಣಮಾಲೆಯನ್ನು ಕಲಿಯಲು ಪರದಾಡಬೇಕಾಗುತ್ತದೆ.ಆಗಲೇ ಕನ್ನಡ ಕಷ್ಟ ಎಂಬ ಭಾವನೆ ಮಗುವಿನ ಮನಸ್ಸಲ್ಲಿ ಮೂಡುತ್ತದೆ. "ಬೆಳೆಯುವ ಸಿರಿ ಮೊಳಕೆಯಲ್ಲಿ" ಎಂಬ ನಾಣ್ಣುಡಿಯಂತೆ ಬಾಲ್ಯದಲ್ಲಿ ನಾವು ಕನ್ನಡ ಕಲಿಸದಿದ್ದರೆ ಮುಂದೊಂದು ದಿನ ಅವರಿಗೆ ಕನ್ನಡ ಬರುವುದಿಲ್ಲ ಎಂದು ಆಪಾದಿಸುವ ಅರ್ಹತೆ ನಮಗಿರುವುದಿಲ್ಲ.ಪಾಲಕರು ದಯವಿಟ್ಟು ಇದನ್ನರಿತು ಮಕ್ಕಳಲ್ಲಿ ಕನ್ನಡಾಭಿಮಾನವನ್ನು ಬೆಳೆಸಬೇಕು.ಕನ್ನಡದ ಸೌಂದರ್ಯವನ್ನು ತಿಳಿ ಹೇಳಬೇಕು.ಆಂಗ್ಲ ಭಾಷೆಯಲ್ಲಿ ಬೇರೆ ಬೇರೆ ವರ್ಣವೂ ಸಹ ಕೆಲವೊಮ್ಮೆ ಒಂದೇ ಉಚ್ಚಾರವನ್ನು ನೀಡುತ್ತದೆ.ಆದರೆ ನಮ್ಮ ಕನ್ನಡ ಹಾಗಲ್ಲ.ಒಂದು ವರ್ಣ ಒಂದೇ ಉಚ್ಚಾರ.ಅದು ಎಂದಿಗೂ ಬದಲಾಗುವುದಿಲ್ಲ.


ಬಾಲ್ಯದಲ್ಲಿಯೇ ಮಕ್ಕಳಿಗೆ ಕನ್ನಡ ಕಲಿಸಿ,ಕನ್ನಡ ಪ್ರೀತಿಯನ್ನು ಬೆಳೆಸಿದಲ್ಲಿ ಮುಂದಿನ ಪೀಳಿಗೆಗೆ ಕನ್ನಡವನ್ನು ಕೊಂಡೊಯ್ಯುವುದು ಸುಲಭವಾಗುತ್ತದೆ.ಕನ್ನಡಿಗರೇ ಆಸಕ್ತಿ ತಳೆದು ಕನ್ನಡ ಕಾರ್ಯಕ್ರಮಗಳನ್ನು,ಕನ್ನಡ ಪತ್ರಿಕೆಗಳನ್ನು,ಕನ್ನಡ ಸಿನೆಮಾಗಳನ್ನು,ಕನ್ನಡ ಸಾಹಿತ್ಯವನ್ನು ಪ್ರೋತ್ಸಾಹಿಸಿ ಬೆಳೆಸಿದರೆ ಮಾತ್ರ ನಮ್ಮ ಕನ್ನಡವನ್ನು ಇನ್ನೂ ಹೆಚ್ಚು ಕಾಲ ಜೀವಂತವಾಗಿರಿಸಬಹುದು.ಅನ್ಯ ಭಾಷೆ ಕಲಿಯುವುದು ತಪ್ಪಲ್ಲ.ಕಲಿತ ಮೇಲೆ ತಾಯಿ ಭಾಷೆಯನ್ನು ಮರೆಯುವುದು ತಪ್ಪು.ಅದೆಷ್ಟೇ ಭಾಷೆಗಳು ತಿಳಿದಿದ್ದರೂ ಭಾವನೆಯನ್ನು ಮನಮುಟ್ಟುವಂತೆ ಹೊರ ಹಾಕಲು ಮಾತೃಭಾಷೆಯಿಂದ ಮಾತ್ರ ಸಾಧ್ಯ.ನಮ್ಮ ಭಾಷೆಯ ಅಳಿವು-ಉಳಿವು ನಮ್ಮ ಕೈಯಲ್ಲಿದೆನಮ್ಮ ಕರ್ತವ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಕನ್ನಡವನ್ನು ಉಳಿಸಿ ಬೆಳೆಸೋಣ.ಕನ್ನಡವೇ ಸತ್ಯ.ಕನ್ನಡವೇ ನಿತ್ಯ.