Saturday, 12 March 2016

ಹಾಗೆ ಸುಮ್ಮನೆ..!!

ಈ ಕಾಲವೇ ಹೀಗೆ..ಅದು ಬದಲಾದಂತೆ ನಮನ್ನು ಬದಲಿಸುತ್ತದೆ.ಅದರ ಓಟಕ್ಕೆ ತಕ್ಕಂತೆ ನಮ್ಮನ್ನೂಓಡಿಸುತ್ತದೆ.ಎಂದೋ ಮಾಡಿದ ಜಗಳ ಇಂದು ಕ್ಷುಲ್ಲಕವೆನಿಸುತ್ತದೆ.ಎಂದೋ ಹಾಡಿದ ಹಾಡು ಇಂದು ಅರ್ಥಪೂರ್ಣ ಎನಿಸುತ್ತದೆ.ಎಂದೋ ಮಾಡಿದ ಕೆಲಸ ಇಂದು ಫಲ ಕೊಡುತ್ತಿದೆ ಎನಿಸುತ್ತದೆ.ಯಾರೋ ಮಾಡಿದ ನೋವು ಮತ್ತೆ ಮತ್ತೆ ಕಾಡುತ್ತದೆ.ಇನ್ಯಾರನ್ನೋ ಜೀವ ಹೆಚ್ಚು ಹೆಚ್ಚು ನೆನಪಿಸಿಕೊಳ್ಳುತ್ತದೆ.

ಜೀವಕ್ಕೆ ಜೀವವಾಗಿದ್ದ ಗೆಳತಿ,ಗೆಳೆಯರು ಯಾವುದೋ ನೆಪವೊಡ್ಡಿ ದೂರಾಗುತ್ತಾರೆ.ನಿನ್ನೆಯ ವರೆಗಿನ ಸತ್ಯ  ಇಂದು ಸುಳ್ಳೆಂದು ಗೊತ್ತಾದ ಬಳಿಕ ಸತ್ಯ-ಸುಳ್ಳುಗಳ ನಡುವಿನ ಅಂತರದ ಹುಡುಕಾಟ ಶುರುವಾಗುತ್ತದೆ.ಇಂದಿನ ಖುಷಿಯನ್ನು ನಾಳೆಯ ಭಯ ಮುಚ್ಚಿ ಹಾಕುತ್ತದೆ.


ಪ್ರತಿ ಕ್ಷಣ ಬದುಕಿನ ದಾರಿಯ ಬದಲಿಸುವ ಹಂಬಲದಲ್ಲಿರುತ್ತೇವೆ.ಇನ್ನೊಬ್ಬರ ಬದುಕಲ್ಲಿ ನಾವು ಕಾಣದ  ಏನೋ ಸಂತೋಷವಿದೆ ಎಂದು ನಂಬುತ್ತೇವೆ.ಅವರ ಬದುಕಲ್ಲಿ ನಾವು ಕಾಣದ ನೋವು ಕೂಡ ಇದೆ ಎಂಬುದು ಮರೆಯುತ್ತೇವೆ.ಇನ್ನೊಬ್ಬರ ಮೆಚ್ಚಿಸುವ ತವಕದಲ್ಲಿ ನಮ್ಮ ಮೆಚ್ಚುಗೆ ಯಾವುದಾಗಿತ್ತೆಂಬುದೇ ಮರೆಯುತ್ತೇವೆ

ಕಣ್ಣಿನ ನೋಟ,ಕಿವಿಗಳ  ಆಲಿಸುವಿಕೆ ಎಲ್ಲವೂ ಭಾಲಿಶವಾಗ ತೊಡಗಿವೆ.ಒಳಾರ್ಥಗಳ ಅರಿಯುವ ಸಹನೆ ಇಲ್ಲವಾಗಿದೆ.ಭಾವನೆಯ ಬೆಲೆಯನ್ನು ಹಣದ ಬೆಲೆಯಿಂದ ಕೊಳ್ಳುತ್ತೇವೆ.ದೊಡ್ಡ ಸಂತೋಷಗಳ ನಡುವೆ ಚಿಕ್ಕ ಖುಷಿಗಳು ಕಾಣದಾಗಿವೆ.ಪಬ್ಬು-ಪಾರ್ಟಿಗಳ ನಡುವೆ ಹಬ್ಬ-ಹರಿದಿನಗಳ ಸಡಗರ ಮರೆಯಾಗಿದೆ

ಕಾಂಕ್ರೀಟು ಗೋರಿಗಳ ನಡುವೆ ನಿಸರ್ಗದ ನಿರುಮ್ಮಳ ನಗೆ ಅಡಗಿ ಹೋಗಿದೆ.ರೆಡಿಮೇಡು ಖಾದ್ಯಗಳ ವಾಸನೆಯ ನಡುವೆ ದೇವರಿಗಿಟ್ಟ ಮಲ್ಲಿಗೆಯ ಘಮ ಮಾಯವಾಗಿದೆ.ಜೀನ್ಸು-ಟಾಪುಗಳ ಹಾವಳಿಗೆ ದಾವಣಿ-ಸೆರಗುಗಳು ಬದಿಗೋಗಿವೆ.ಟೀವಿ-ಸೀರೇಲುಗಳ ಪ್ರಭಾವಕ್ಕೆ ಆಡುವ ಮಾತಿನ ತೂಕ ಕಡಿಮೆಯಾಗಿದೆ.

ಆಡುವ ಕೈಲಿ ಬೇಡದ ಮೊಬೈಲು ಬಂದಿದೆ.ಪುಸ್ತಕದ ಬದಲು ಇಂಟರ್ನೆಟ್ ಬಂದಿದೆ.ಮಾನವ ಯುಗದಿಂದ  ಯಾಂತ್ರಿಕ ಯುಗಕ್ಕೆ ಬದಲಾಗುತ್ತಿದೆ.ಚಂದಿರ ತುತ್ತು ತಿನಿಸಲು ಮಾತ್ರ ಅಲ್ಲ ಚಂದಿರನಲ್ಲಿಗೆ ಹೋಗಿ ಬರಲು ಸಾಧ್ಯ ಎಂದು ತಿಳಿದಿದ್ದೇವೆ.ಕ್ಷಣಾರ್ದದಲ್ಲಿ ಜಗತ್ತನ್ನೇ ಕೊಳ್ಳುವ ದುಸ್ಸಾಹಸದಲ್ಲಿದ್ದೇವೆ.ಯೋಚನಾ ಲಹರಿಗಳ ಬದಿಗೊತ್ತಿ ಅವಸರದ ಬದುಕು ಕಟ್ಟಿಕೊಂಡಿದ್ದೇವೆ.


ಕಾಲದ ಜೊತೆ ಸೆಣಸಾಡಿ ಏನನ್ನೋ ಗೆಲ್ಲುವ ತವಕದಲ್ಲಿ ಎಲ್ಲವನ್ನು ಮರೆತಿದ್ದೇವೆ..ಹೆತ್ತ ತಾಯಿಯನನ್ನೂ ಕೂಡ...!!!ಇಂತಹ ಅರ್ಥಹೀನ ಬದುಕನ್ನು ಸಾವಿರ ವರ್ಷ ಬದುಕುವುದಕ್ಕಿಂತ
ಭಾವಪೂರ್ಣವಾಗಿ ಒಂದು ದಿನ ಬದುಕಿದರೂ ಸಾಕಲ್ಲವೇ..?







No comments:

Post a Comment