Thursday, 11 August 2016

ಬಾನಂಗೋಚಿ..


ಬಾನಿಗೊಮ್ಮೆ ಹಾರುವಾಸೆ 
ಬಾನಂಗೋಚಿಯಾಗುವಾಸೆ
ಮೋಡದೊಡನೆ ತೇಲಿ ತೇಲಿ
ಮನದ ನೋವ ಮರೆಯುವಾಸೆ..

ಮೇಲೆ ಹೋಗಿ ಹಗುರವಾಗಿ
ತನ್ನ ತನವ ಕಾಣುವಾಸೆ
ಸೂರ್ಯ ಚಂದ್ರ ತಾರೆಯೊಡನೆ
ಸ್ನೇಹಸೌಧ ಕಟ್ಟುವಾಸೆ..

ಮೇಲೆ ಹೋಗಿ ಇಣುಕಿ ನೋಡಿ
ಕಣ್ಣಾಮುಚ್ಚೆಯಾಡುವಾಸೆ..
ಮಗುವಿನಂತೆ ಮುಗ್ಧವಾಗಿ
ಬಾನ ತೊಟ್ಟಿಲಲಿ ಮಲಗುವಾಸೆ..

ಕೊನೆಯೇ ಇರದ ಬಾನಿನಲ್ಲಿ
ಗೆಜ್ಜೆ ಕಟ್ಟಿ ಕುಣಿಯುವಾಸೆ
ಯಾರೂ ಇರದ ಊರಿನಲ್ಲಿ
ನಾನೇ ನನ್ನ ಹುಡುಕುವಾಸೆ..

ಬಾನಾಡಿ ಜೊತೆ ಸೇರಿ
ಸ್ವತಂತ್ರವಾಗಿ ಹಾರುವಾಸೆ
ಬಾನಲಿರುವ ಸ್ವಚ್ಚಂದ ಪ್ರೀತಿಯಾ
ಭೂಮಿಗೂ ತರುವ ಆಸೆ...






Saturday, 6 August 2016

ವಿರಹಿ...!



ಕಾಡುವ ಪದಗಳ ಲೋಕಕೆ
ನೀನೇ ಮಾಲಿಕನು..
ತೇಲುವ ತೆರೆಗಳ ಕಡಲಿಗೆ
ನೀನೇ ಯಾತ್ರಿಕನು..
ಏನೇ ಹಾಡಿದರೂ ನಾನೇನೇ ಗೀಚಿದರೂ
ನಿನ್ನ ನೆನಪೇ ನನ್ನನ್ನು ಸಂಮೋಹಿಸುತಿದೆ



ಸಾಕಾಯ್ತು ನಂಗಂತೂ ಮಾತುಕತೆ
ಆಲಿಸುವೆ ನಿನ್ನ ಕವಿತೆ..
ಜೋರಾಯ್ತು ನನ್ನಲ್ಲಿ ಮೂಕವ್ಯಥೆ
ಊಹಿಸಲು ನಿನ್ನ ಕುರಿತೇ..
ಮುಗಿಯದ ಭಾವದ ಬಳುವಳಿಗೆ
ಮರುಗಿದೆ ನನ್ನ ಮನ



ನೀ ಆಡಿದ ಎಲ್ಲಾ ಮಾತಿಗೂ ಕೂಡ
ನನ್ನ ಭಾವವೂ ನಿಗೂಢ..
ನೀ ಕಾಡಿದ ಎಲ್ಲಾ ಕನಸಲೂ ಕೂಡ
ನನ್ನ ಕಲ್ಪನೆ ಅಗಾಧ..
ಚುರುಕಿನ ಪ್ರೀತಿಯ ಚಳುವಳಿಗೆ
ಕರಗಿದೆ ನನ್ನ ಮನ