ಕೊಂಚ ತಿಳಿಯಾದ ಸಂಜೆಯ ಬಾನಿಗೆಕಾಮನಬಿಲ್ಲನ್ನು ಧರಿಸುವ ಬಯಕೆ
ಕಡಲಿನ ಮೊರೆತದ ಲಜ್ಜೆಯ ನಡುಗೆಗೆ
ರವಿ ಜಾರಿ ಬಂದು ಕೊಡುವ ಮುತ್ತಿನ ಬಯಕೆ..
ಬೆಳಕನು ಹಿಂದಿಕ್ಕಿ ಓಡಿ ಬರುವ ತಮಸ್ಸಿಗೆ
ಚುಕ್ಕಿಯಾಟಕೆ ಸಾಕ್ಷಿಯಾಗುವ ಬಯಕೆ
ಚಟ ಪಟ ಉದುರುವ ಮಳೆಹನಿಗಳಿಗೆ
ಭೂತಾಯಿಗೆ ಉಂಗುರ ತೊಡಿಸುವ ಬಯಕೆ...
ವದನದಿ ಮೂಡಿಹ ಮಂದಹಾಸಕೆ
ಭಾವದ ಗೆರೆಗಳ ಅಳಿಸುವ ಬಯಕೆ
ಸಾಗುವ ದಾರಿಯೇ ವಿಶಾಲವಿದ್ದರೂ
ಕಾಣದ ದಾರಿಗೆ ತಿರುಗುವ ಬಯಕೆ...
ಮೌನದ ಬೆಲೆಯೇ ಹಿರಿದಾಗಿದ್ದರೂ
ಮಾತಿನ ಒಡವೆಯ ಕೊಳ್ಳುವ ಬಯಕೆ
ಪ್ರೀತಿಯ ಶಿಖರ ಏರಿದ ಮೇಲೂ
ಆಳವ ನೋಡಲು ಧುಮುಕುವ ಬಯಕೆ....
ಕನಸಲಿ ಕಾಣುವ ಬಣ್ಣದ ಲೋಕಕೆ
ರೆಕ್ಕೆಯ ತೊಟ್ಟು ಹಾರುವ ಬಯಕೆ
ಜಗಲಿಯ ಹರಟೆಯ ಹರಾಜು ಹಾಕಿ
ಫೋನಿನ ರಿಂಗಣಿಗೆ ಕಾಯುವ ಬಯಕೆ.....
ನೂರಾರು ಬಯಕೆಯ ರಾಶಿಯ ನಡುವೆ
ಕುಗುರುತ ಮಲಗಿವೆ ನೆನಪುಗಳು
ಬಳಿಯೇ ಇದ್ದರೂ ಬೆಳಕಿಗೆ ಬಾರದೆ ಉಳಿದಿವೆ
ಎಷ್ಟೋ ಸುಂದರ ಕ್ಷಣಗಳು.....
