Sunday, 11 October 2015

ಎಲ್ಲಿರುವೆ...????



ನಿನ್ನ ಕಾಣದೇ ಮನ ಮುದುಡಿದೆ
ನಾ ಏನೆಂದರೂ ಕೇಳದೇ ಮಲಗಿದೆ
ನೀ ಮಾಡು ಬಂದು ಅದನೆಚ್ಚರ
ಮುರಿದು ಬಾ ಬೇಗ ನೀ ಈ ಅಂತರ

ನೀಗು ಬಾ ನೀ ನನ್ನ ಆಳದ  ಅಳಲು
ಉಸಿರಿಲ್ಲದೇ ಕಾಯುತಿದೆ ಈ ಕೊಳಲು
ಭಾವನೆ ಬರಡಾಗಿದೆ ಇಂದು
ಜೀವ ನೀಡು ನೀ ಬೇಗ ಬಂದು

ತಂಗಾಳಿಯು ತಂಪೆನಿಸದು
ನೀ ಬಳಿ ಇಲ್ಲದೇ
ಜಗವೆಲ್ಲವೂ ನಿಂತೋಗಿದೆ
ನೀ ಬಳಿ ಬಾರದೇ


ಯಾಕಿಷ್ಟು ಕಾಯಿಸುವೆ..  ಕಾಯುವ ತಾಳ್ಮೆ  ನನ್ನಲ್ಲಿಲ್ಲ..
ಯಾಕಿಷ್ಟು ಮೌನಿಯಾಗಿರುವೆ..ನಾ ಮೂಕನಲ್ಲ..
ಯಾಕಿಷ್ಟು ನಿರ್ಭಾವಿಯಾಗಿರುವೆ..ನಾ ನಿರ್ಜೀವ ಬೊಂಬೆಯಲ್ಲ..
ಯಾಕಿಷ್ಟು ಪರೀಕ್ಷಿಸುವೆ..ನಾ ಪರೀಕ್ಷೆ ಬರೆಯುವ ಸ್ಥಿತಿಯಲ್ಲಿಲ್ಲ..

ಬಡಿಯುವ ಹೃದಯ ನಿಲ್ಲುವ ಮುನ್ನ...
ಕವಿದಿಹ ಇರುಳು ಸರಿಯುವ ಮುನ್ನ..
ನಾ ನನ್ನ ಹೃದಯದ ಖದ ತೆಗೆದಿರುವೆ
ಬಂದು ನೀ ಸೇರುವೆಯಾ ನನ್ನೊಳಗೆ...
ನೀನಿಲ್ಲದೇ ನಾ ಹೇಗಿರಲಿ ನನ್ನೊಳಗೆ...!!!



Wednesday, 7 October 2015

ಭಾರತೀಯರಿಗೆ ನನ್ನ ಕರೆ...!!!

ಖದ ತೆರೆದು ಹೊರ ಬನ್ನಿ
ಓ ಭಾರತೀಯರೇ
ಹೇಡಿಗಳ ಮುಖವಾಡ
ಕಳಚಿ ಬನ್ನಿ...

ಅನೀತಿ,ಅನಾಗರೀಕತೆ
ಹಿಂಸೆ,ಅರಾಜಕತೆ
ತಾಂಡವವಾಡುತ್ತಿರುವ
ಪರಿಯ ತಿಳಿಯ ಬನ್ನಿ..

ಭುಗಿಲೆದ್ದು ಭೋರ್ಗರೆದು
ಬರಸಿಡಿಲು ಬಡಿದಂತೆ
ಭಾರತಿಗೆ ಮುಸುಕಿರುವ
ಕರಿಪರದೆ ಸರಿಸ ಬನ್ನಿ....

ಪರದೇಶಿ ಪರಕೀಯರ
ದಾಸರಾಗಿ ಬದುಕದೇ
ಭಾರತದ ಬಲಕ್ಕೆಂದು
ದುಡಿಯ ಬನ್ನಿ..

ಕರಿ ಹಣವ ಕಂಡಾಗ
ಕರಿನಾಗರ ಹಾಯ್ದಂತೆ
ಬುಸುಗುಟ್ಟಿ ಹೆಡೆಯೆತ್ತಿ
ತಡೆಯ ಬನ್ನಿ...

ಹೆಣ್ಣನ್ನು ತಾಯೆಂದು
ಪೂಜಿಸುವ ತಾಯ್ನಾಡಿದು
ಹೆಣ್ಣಿನ ಘನತೆಯ
ಮುಗಿಲೆತ್ತರಕ್ಕೇರಿಸ ಬನ್ನಿ...


ಹಿಮಾದ್ರಿ-ಸಹ್ಯಾದ್ರಿ
ಕರುನಾಡ ಕಾವೇರಿ
ಥಾರ್ ನ ಮರುಭೂಮಿ
ಭಾರತಿಯ ಭೂರಮೆಯ
ನೋಡಬನ್ನಿ..

ನೇತಾಜಿ-ಬಾಪೂಜಿ
ಅಣ್ಣಾಜಿ-ರಾಮ್ ದೇವ್ ಜೀ
ಇವರುಗಳ ದಾರಿಯಲಿ
ಮುಂದೆ ನಡೆಯಬನ್ನಿ..

ಜೀವನದ ಕನಸ ಬಿಟ್ಟು
ಪ್ರಾಣವನು ಪಣಕೆ ಇಟ್ಟು
ಗಡಿಕಾಯೋ ಗಣ್ಯರಿಗೆ
ಶರಣು ಎನ್ನಿ...

ಅವರಿವರ ಕಾಲೆಳೆಯೋ
ಬಲು ಹೇಯ ಕೃತ್ಯವನು
ಕೈತೊಳೆದು ಬದಿಗಿರಿಸಿ
ಸತ್ಪ್ರಜೆಯಾಗ ಬನ್ನಿ...

ಬಡತನದ ಬುಡಕಿತ್ತು
ಯುವಜನತೆ ಪುಟಿದೆದ್ದು
ಭಾರತಿಯ ಭವ್ಯತೆಗೆ
ಮೆರುಗು ತನ್ನಿ...

ಬಿಸಿರಕ್ತದ ಕುದಿ ಆರುವ ಮುನ್ನ
ಗಲಭೆಯ ಬಿಸಿ ಏರುವ ಮುನ್ನ
ಸೌಹಾರ್ದ ಸ್ನೇಹವ ಬೆಸೆಯ ಬನ್ನಿ
ಸುಂದರ ಭಾರತವ ಕಟ್ಟ ಬನ್ನಿ....!!